ಕುಮಾರವಾಲ್ಮೀಕಿ: -

ಸುಪ್ರಸಿದ್ಧ ತೊರವೆ ರಾಮಾಯಣದ ಕರ್ತೃ. ಈತನ ಕಾವ್ಯದಲ್ಲಿ ಕಾಲನಿರ್ದೇಶಕ ಅಂಶಗಳಾವುವೂ ಕಂಡುಬರುವುದರಿಂದ ಖಚಿತವಾಗಿ ಈತನ ಕಾಲವನ್ನು ನಿರ್ಧರಿಸಲು ಸಾಧ್ಯವಿಲ್ಲವಾಗಿದೆ. ಈತ ಸ್ತುತಿಸಿರುವ ಕುಮಾರವ್ಯಾಸನ ಕಾಲವೂ ಖಚಿತವಾಗಿಲ್ಲ. ಕುಮಾರವಾಲ್ಮೀಕಿಯನ್ನು ಸ್ಮರಿಸುವ ಕನಕದಾಸರ ಕಾಲವೂ ನಿರ್ಧರವಾಗಿಲ್ಲ. ಆದುದರಿಂದ ಕುಮಾರವ್ಯಾಸ, ಕನಕದಾಸ ಈ ಇಬ್ಬರು ಮಧ್ಯಕಾಲದಲ್ಲಿ ಜೀವಿಸಿದ್ದಿರಬಹುದಾದ ಕುಮಾರವ್ಮಾಲೀಕಿಯ ಕಾಲವೂ ಸ್ಟಷ್ಟವಾಗಿಲ್ಲ. ಕವಿಚರಿತ್ರೆಕಾರರು ಈತನ ಕಾಲವನ್ನು 1500 ಎಂದಿದ್ದಾರೆ. ಈಚಿನ ಅಭಿಪ್ರಾಯದಂತೆ ಈತನ ಕಾಲ ಹದಿನಾರನೆಯ ಶತಮಾನದ ಅಂತ್ಯಭಾಗವೆಂದು ಭಾವಿಸಬಹುದಾಗಿದೆ.

 ಕುಮಾರವ್ಮಾಲೀಕಿ ಎಂಬುದು ಕವಿಯ ಬಿರುದೇ ಹೊರತು ನಿಜವಾದ ಹೆಸರಲ್ಲ. ವ್ಯಾಸಭಾರತವನ್ನು ಕನ್ನಡಿಸಿದ ನಾರಣಪ್ಪ ತನ್ನನ್ನು ಕುಮಾರವ್ಯಾಸನೆಂದು ಸಂಭೋಧಿಸಿಕೊಂಡಿರುವಂತೆ ವಾಲ್ಮೀಕಿ ರಾಮಾಯಣವನ್ನು ಕನ್ನಡಿಸಿದ ನರಹರಿ ತನ್ನನ್ನು ಕುಮಾರವ್ಮಾಲೀಕಿ ಎಂದು ಸಂಭೋಧಿಸಿಕೊಂಡಿದ್ದಾನೆ. ಆದುದರಿಂದ ಕವಿಯ ನಿಜವಾದ ಹೆಸರು ನರಹರಿ. ಈತನಿಗೆ ಕವಿರಾಜಹಂಸ ಎಂಬ ಬಿರುದಿದ್ದಂತೆ ಈತನ ಕಾವ್ಯದಿಂದಲೇ ತಿಳಿದುಬರುತ್ತದೆ. ನರಹರಿಯ ಜನಸ್ಥಳ ತೊರವೆ. ಈ ತೊರವೆ ಬಿಜಾಪುರದ ಪಶ್ಚಿಮಕ್ಕೆ ನಾಲ್ಕು ಮೈಲಿ ದೂರದಲ್ಲಿದೆ. ಎರಡನೆಯ ಇಬ್ರಾಹಿಮ್ ಆದಿಲ್‍ಶಹ ಅಲ್ಲಿ ದೊಡ್ಡ ಅರಮನೆಗಳನ್ನೂ ಮಸೀದಿಗಳನ್ನೂ ಕಟ್ಟಿಸಿ ವಾಸಿಸುತ್ತಿದ್ದಂತೆ ತಿಳಿದುಬರುತ್ತದೆ. ಅಲ್ಲಿ ಅರ್ವಾಚೀನಕಾಲದ ಕೆಲವು ಗುಡಿಗಳಿವೆ. ಅವುಗಳಲ್ಲಿ ನರಸಿಂಹ ದೇವರ ಗುಡಿ ಮುಖ್ಯವಾದುದು. ಆ ಗುಡಿಯನ್ನು ಇಟ್ಟಿಗೆಗಳಿಂದ ಚಚ್ಚೌಕವಾಗಿ ಕಟ್ಟಿದ್ದಾರೆ. ನರಹರಿ ತನ್ನ ಗ್ರಂಥವನ್ನು ತೊರವೆಯ ನರಸಿಂಹದೇವರ ಅಂಕಿತದಲ್ಲಿ ಬರೆದಿದ್ದಾನೆ. ಆದುದರಿಂದಲೇ ಈತನ ರಾಮಾಯಣಕ್ಕೆ ತೊರವೆ ರಾಮಾಯಣ ಎಂಬ ಹೆಸರೇ ರೂಢಿಯಲ್ಲಿದೆ. ಮೈರಾವಣನ ಕಾಳಗ ಎಂಬ ಮತ್ತೊಂದು ಗ್ರಂಥವನ್ನೂ ಈತನೇ ಬರೆದನೆಂಬ ಪ್ರತೀತಿ ಇದೆ. ಆದರೆ ತೊರವೆ ರಾಮಾಯಣದ ಶೈಲಿಗೂ ಮೈರಾವಣನ ಕಾಳಗದ ಶೈಲಿಗೂ ವಿಶೇಷ ವ್ಯತ್ಯಾಸ ಕಂಡುಬರುವುದರಿಂದ ಇವೆರಡನ್ನೂ ಕುಮಾರ ವಾಲ್ಮೀಕಿಯೇ ರಚಿಸಿದನೋ ಇಲ್ಲವೋ ಎಂಬುದನ್ನು ವಿಚಾರ ಮಾಡಬೇಕಾಗಿದೆ. ಸದ್ಯಕ್ಕೆ ಈತ ತೊರವೆ ರಾಮಾಯಣವನ್ನು ಮಾತ್ರ ಬರೆದಿದ್ದಾನೆ ಎಂದಿಟ್ಟುಕೊಳ್ಳಬಹುದು. 

 ತೊರವೆ ರಾಮಯಣದಲ್ಲಿ ಕವಿ ಕುಮಾರವ್ಯಾಸನೊಬ್ಬನನ್ನು ಬಿಟ್ಟು ಮತ್ತಾವ ಕನ್ನಡಕವಿಯನ್ನೂ ಸ್ಮರಿಸಿಲ್ಲ, ಹೊಗಳಿಲ್ಲ.

 ಸರಸವರ್ಣಕ ಕವಿಗಳೊಳು ಭಾ

ಸುರ ಕುಮಾರವ್ಯಾಸನೊಬ್ಬನು

ಪರಿಕಿಸುವೊಡಾನೊಬ್ಬ ಮಗುಳೆಣಿಸುವರೆ ವರ್ಣಕಕೆ|

ವರಕುಮಾರವ್ಯಾಸನೊಬ್ಬನು

ಯೆರಡನೆಯಲಾನೊಬ್ಬ ಮಿಕ್ಕಿನ

ಜರಡು ಕವಿಗಳ ಲೆಕ್ಕಿಸುವನೆ ಕುಮಾರವಾಲ್ಮೀಕಿ||

ಎಂಬ ಈ ಪದ್ಯದಲ್ಲಿ ತನ್ನ ಅಭಿಪ್ರಾಯವನ್ನು ಕವಿ ಸ್ಪಷ್ಟಪಡಿಸಿದ್ದಾನೆ.

 ತೊರವೆ ರಾಮಯಣದಲ್ಲಿ ಆರು ಕಾಂಡಗಳೂ ಸುಮಾರು 5,100 ಪದ್ಯಗಳೂ ಇವೆ. ಕಾವ್ಯ ಭಾಮಿನೀ ಷಟ್ಟದಿಯಲ್ಲಿದೆ. ಇಲ್ಲಿನ ಯುದ್ಧಕಾಂಡ ಉಳಿದ ಐದು ಕಾಂಡಗಳ ಮೊತ್ತಕ್ಕಿಂತಲೂ ದೊಡ್ಡದಾಗಿದೆ. ತೊರವೆ ರಾಮಾಯಣ ವಾಲ್ಮೀಕಿ ರಾಮಾಯಣದ ಕಥಾಸರಣೀಯನ್ನೇ ಅನುಸರಿಸಿ ರಚಿತವಾಗಿದೆ. ಆದರೆ ಕವಿ ಅಲ್ಲಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ. ಅವುಗಳಲ್ಲಿ ಪ್ರಮುಖವಾದ ಒಂದೆರಡಂಶಗಳನ್ನು ಇಲ್ಲಿ ಗಮನಿಸಬಹುದಾಗಿದೆ. ತೊರವೆರಾಮಾಯಣದ ಪ್ರಾರಂಭದಲ್ಲಿ ಈಶ್ವರ ಪಾರ್ವತಿಗೆ ಶ್ರೀರಾಮನ ಚರಿತ್ರೆಯನ್ನು ವಿವರಿಸುತ್ತಾನೆ. ಇಲ್ಲಿಯ ಶ್ರೀರಾಮ ಸಾಮಾನ್ಯ ಮಾನವನಲ್ಲ. ವಿಷ್ಣುವಿನ ಅವತಾರ. ಮಂಥರೆ ಮಾಯೆಯ ಪ್ರತೀಕ. ಇಲ್ಲಿಯ ರಾವಣ ಸ್ವಲ್ಪಮಟ್ಟಿಗೆ ದುರಂತನಾಯಕನಾಗಿ ಕಾಣುತ್ತದೆ. ಈ ಕೆಲವು ಮಾರ್ಪಾಡುಗಳನ್ನು ಕವಿ ಅಧ್ಯಾತ್ಮ ರಾಮಾ
ಯಣವನ್ನುಸರಿಸಿ ಮಾಡಿಕೊಂಡಿರಬಹುದೆಂದು ಊಹಿಸಬಹುದಾಗಿದೆ

 ವಾಲ್ಮೀಕಿ ರಾಮಾಯಣದ ಕಥಾಸರಣೀಯನ್ನೇ ಅನುಸರಿಸಿ ರಚಿತವಾದ ವೈದಿಕ ರಾಮಾಯಣಗಳು ಕುಮಾರವಾಲ್ಮೀಕಿಗಿಂತ ಮುಂಚೆ ಯಾವುದೂ ಕಂಡುಬರುವುದಿಲ್ಲ. ತೊರವೆ ರಾಮಾಯಣದಲ್ಲಿ ಕವಿ ಸರಸವರ್ಣಕ ಕವಿಗಳಲ್ಲಿ ಮೊದಲು ಕುಮಾರವ್ಯಾಸ ಆಮೇಲೆ ತಾನು, ಉಳಿದವರೆಲ್ಲರೂ ಜರಡು ಕವಿಗಳು, ಶಬ್ದಾಕ್ಷರದರಿದ್ರರು, ಬಂಧುರರಸವಿವರ್ಜಿತರು ಎಂದು ಹೇಳಿಕೊಂಡಿದ್ದಾನೆ. ಈ ಹೇಳಿಕೆ ತುಸು ಕೆಚ್ಚಿನ ಮಾತಾದರೂ ಭಕ್ತಕವಿಯಾದ ಕುಮಾರವಾಲ್ಮೀಕಿ ತನ್ನ ಕೃತಿಯ ಮಹಿಮೆಯ ಭರದಲ್ಲಿ ಹೇಳಿದ ಮಾತು-ಎಂದಿಟ್ಟುಕೊಳ್ಳಬಹುದು. ಈತ ತನ್ನ ಕೃತಿಯನ್ನು ರಾಜಾಸ್ಥಾನಕ್ಕಾಗಲಿ ಪಂಡಿತಮಂಡಲಿಗಾಗಲಿ ಬರೆಯಲಿಲ್ಲ. ಜನಸಾಮಾನ್ಯದ ಉದ್ದಾರಕ್ಕಾಗಿ ವಾಲ್ಮೀಕಿ ರಾಮಯಣದ ಕಥೆಯನ್ನು ಕನ್ನಡ ಷಟ್ಟದಿಗಳಲ್ಲಿ ಭಕ್ತಿಪರವಶನಾಗಿ ಹಾಡಿದ. ಈತ ಮಧ್ಯಮವರ್ಗದ ಕವಿ. ಈತನ ಕೃತಿ ಪಂಡಿತರಂಜಕವಲ್ಲದಿದ್ದರೂ ಪಾಮರರಿಗೆ ಪ್ರಿಯವೆನಿಸಿದೆ. ಕಾವ್ಯದಲ್ಲಿ ಭಕ್ತಿಯಷ್ಟು ತೀವ್ರವಾಗಿ ಕಾವ್ಯಗುಣ ವ್ಯಕ್ತವಾಗಿಲ್ಲವೆಂಬ ವಿಷಯ ಸ್ಪಷ್ಟ. ಹೃದ್ಯ ಸಂದರ್ಭಗಳೂ ಬಂದಾಗ ಕವಿ ಉಚಿತ ರೀತಿಯಲ್ಲಿ ಅವನ್ನು ನಿರ್ವಹಿಸಿ ಪಾತ್ರಗಳ ಮನೋಧರ್ಮವನ್ನು ಹೊರಪಡಿಸುತ್ತಾನೆ. ಕಥೆಗಾರಿಕೆಯಲ್ಲಿ ನಿರರ್ಗಳವಾದ ಓಟವಿದೆ, ಅಚ್ಚುಕಟ್ಟಿದೆ, ಆದರೆ ಕಾವ್ಯತೆ ಉಜ್ಜ್ವಲವಾಗಿ ತೀಕ್ಷ್ಣವಾಗಿ ಮುಂದುವರಿಯುವುದಿಲ್ಲ. ಕವಿಯ ಭಾಷೆ ಮತ್ತು ಛಂದೋರಚನೆ ಬಹಳ ಬಿಗಿಯಾದದು. ಇಲ್ಲೆಲ್ಲ ಕುಮಾರವ್ಯಾಸನ ಪ್ರಭಾವ ಎದ್ದುತೋರುತ್ತದೆ. ಅಲ್ಲಲ್ಲಿ ಕಾಳಿದಾಸನ ಪ್ರಭಾವವೂ ಕಾಣುತ್ತದೆ. ಒಟ್ಟಿನಲ್ಲಿ ಅಂದಿನ ಕಾಲಕ್ಕೆ ಕುಮಾರವ್ಯಾಸಭಾರತ ಎಷ್ಟರಮಟ್ಟಿಗೆ ಜನಪ್ರಿಯವಾಗಿತ್ತೋ ಬಹುಶಃ ಅಷ್ಟರಮಟ್ಟಿಗೇ ತೊರವೆ ರಾಮಾಯಣವೂ ಜನಪ್ರಿಯವಾಗಿತ್ತೆಂದು ಭಾವಿಸಬಹುದಾಗಿದೆ. ಕುಮಾರವಾಲ್ಮೀಕಿ ಜನ ಸಾಮಾನ್ಯದ ಕವಿ. ಅದಕ್ಕಿಂತ ಮಿಗಿಲಾಗಿ ಭಕ್ತಕವಿ. ವಾಲ್ಮೀಕಿ ರಾಮಾಯಣವನ್ನು ಮೊದಲಬಾರಿಗೆ ಸಂಗ್ರಹಿಸಿದ ಕನ್ನಡ ಕವಿ.           

(ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ